Choose Language:

ಕರ್ತವ್ಯ ಹಾಗೂ ನಿರೀಕ್ಷೆಗಳ ಸಂಘರ್ಷ

ಅವನಿಗೆ ಈಗ ಒಂದು ವರ್ಷ ಆರು ತಿಂಗಳು. ನಗುತ್ತಾನೆ, ಅಳುತ್ತಾನೆ, ಹಠ ಮಾಡುತ್ತಾನೆ, ಎಲ್ಲರ ಜೊತೆ ಹೊಂದಿಕೊಳ್ಳುತ್ತಾನೆ, ತನ್ನ ತೊದಲು ನುಡಿಗಳಿಂದ "ಅಮ್ಮ, ಲವ್ ಯೂ" ಅಂತ ಹೇಳುತ್ತಾನೆ, ಪ್ರೀತಿಯಿಂದ ಬಾಚಿ ಅಪ್ಪಿಕೊಳ್ಳುತ್ತಾನೆ, ತಲೆಹರಟೆ ಮಾಡುತ್ತಾನೆ. ನಾನು ಮುನಿಸಿಕೊಂಡು ಎದ್ದುಹೊರಟರೆ, "ಅಮ್ಮ, ಅಮ್ಮ, ಅಮ್ಮ" ಅಂತ ಹಿಂದೆ ಓಡಿ ಬಂದು ಕ್ಷಮೆಯಾಚಿಸಿ, ತನ್ನ ಮುದ್ದು ಆಟಗಳಿಂದ ನನ್ನನ್ನು ಮರುಳು ಮಾಡುತ್ತಾನೆ. ಮನಸ್ಸಿನ ಎಲ್ಲಾ ನೋವು, ಅಸಮಾಧಾನಗಳನ್ನು ಮರೆಸುತ್ತಾನೆ.

                ಮಗುವಿನ ಈ ತುಂಟಾಟ, ಮುಗ್ಧತೆ, ಜಗತ್ತನ್ನೇ ಮರೆಸುವ ಪ್ರೀತಿ - ಎಲ್ಲಿಯವರೆಗೆ ತಂದೆ-ತಾಯಿಯ ಜೊತೆ ಕೊಡಬಹುದು? ಅವನೂ ಬೆಳೆಯುತ್ತಾನೆ. ವಯಸ್ಸಿಗೆ ತಕ್ಕ ಬುದ್ಧಿ ಮತ್ತು ಪ್ರಬುದ್ಧತೆ ಬರುತ್ತದೆ. ತನ್ನದೇ ಆದ ಜಗತ್ತು ಕಟ್ಟಿಕೊಳ್ಳುತ್ತಾನೆ. ಶಿಕ್ಷಣ, ವೃತ್ತಿ, ಪ್ರೀತಿ-ಪ್ರೇಮ, ಮದುವೆ, ಮಕ್ಕಳು - ಹೀಗೆ ಜೀವನದ ಪ್ರಾಮುಖ್ಯತೆಗಳು ಬದಲಾಗುತ್ತವೆ. ಮಕ್ಕಳ ಜಗತ್ತಿನಲ್ಲಿ ತಮ್ಮನ್ನೇ ಮರೆತಿದ್ದ ತಂದೆ-ತಾಯಿ ಅವನ ಜಗತ್ತಿನಿಂದ ಮರೆಯಾಗುತ್ತಾ ಹೋಗುತ್ತಾರೆ. ಅದಕ್ಕೆ ಕಾರಣ ಆತನ ಅಸಡ್ಡೆಯೂ ಅಲ್ಲ, ನಿರ್ಲಕ್ಷತನವೂ ಅಲ್ಲ. ಇದು ಜೀವನದ ಅನಿವಾರ್ಯತೆ! ಹಾಗಿದ್ದರೆ ಮಕ್ಕಳಿಗೆ ತಂದೆ-ತಾಯಿಯ ಮೇಲೆ ಪ್ರೀತಿ ಕಡಿಮೆ ಆಗುತ್ತದೆಯೇ? ಖಂಡಿತವಾಗಿಯೂ ಇಲ್ಲ. ಆದರೆ ಆದ್ಯತೆಗಳ ಬದಲಾವಣೆ ಖಚಿತ.

                ಭಾರತೀಯ ವಿಚಾರಧಾರೆ ಹಿನ್ನಲೆಯಲ್ಲಿ ಯೋಚಿಸಿದಾಗ ತಂದೆ-ತಾಯಿಯಂದಿರಿಗೆ ಹಲವು ಪ್ರಶ್ನೆಗಳು ಕಾಡುವುದು ಸಹಜ. ನಮ್ಮ ನಿಸ್ವಾರ್ಥ ಪ್ರೀತಿಯ ಮೌಲ್ಯ ಮಕ್ಕಳು ತಮ್ಮ ಬಾಳು ಕಟ್ಟಿಕೊಳ್ಳುವವರೆಗೂ ಅಷ್ಟೆಯೇ? ನಮ್ಮ ಮುಪ್ಪಿನ ವಯಸ್ಸಿನಲ್ಲಿ ನಮ್ಮೊಂದಿಗೆ ಇದ್ದು, ನಮ್ಮನ್ನು ನೋಡಿಕೊಳ್ಳುವ ಜವಾಬ್ದಾರಿ ಅವರದಲ್ಲವೇ? ಹೊಸ ಜಗತ್ತು ರಚಿಸಲು ಕಲಿಸಿಕೊಟ್ಟ ತಂದೆ-ತಾಯಿಯನ್ನು ಅದೇ ಜಗತ್ತಿನಿಂದ ದೂರ ಇಡುವುದು ಸರಿಯೇ? ತರ್ಕಬದ್ಧವಾಗಿ ಯೋಚಿಸಿದಾಗ ಮಕ್ಕಳು ಸರಿ. ಭಾವನಾತ್ಮಕವಾಗಿ ಯೋಚಿಸಿದಾಗ ತಂದೆ-ತಾಯಿಯೂ ಸರಿ.

                ಮಗುವಿಗೆ ಜನ್ಮ ಕೊಟ್ಟಿದ್ದು ಸ್ವ-ಇಚ್ಛೆಯಿಂದ. ಮಗುವಿನ ಲಾಲನೆ-ಪಾಲನೆ ಮಾಡಿದ್ದು ನಮ್ಮಲ್ಲಿರುವ ಪ್ರೀತಿಯಿಂದ. ಮಗುವನ್ನು ಮನುಷ್ಯನನ್ನಾಗಿ ಮಾಡಿದ್ದು ಅವನಿಗೆ ಒಳಿತಾಗಲಿ ಎನ್ನುವ ಭಾವದಿಂದ. ಎಲ್ಲವೂ ನಮ್ಮ ಸ್ವ-ಇಚ್ಛೆಯಿಂದ ಮಾಡಿರುವಾಗ, ಅವರು ನಮ್ಮೊಂದಿಗೇ ಇರಲಿ ಎನ್ನುವ ನಿರೀಕ್ಷೆ ಅಥವಾ ಅವರು ನಮ್ಮನ್ನು ನೋಡಿಕೊಳ್ಳಲಿ, ಅದು ಅವರ ಜವಾಬ್ದಾರಿ' ಎನ್ನುವ ಭಾವ ಎಷ್ಟರ ಮಟ್ಟಿಗೆ ಸರಿ?

                ಮಕ್ಕಳು ತಮ್ಮ ಜೀವನವನ್ನು ರೂಪಿಸಿಕೊಳ್ಳಲಿ, ಸುಂದರವಾಗಿ ಕಟ್ಟಿಕೊಳ್ಳಲಿ, ಬದುಕಿನಲ್ಲಿ ಯಶಸ್ವಿಯಾಗಲಿ. ಅದರ ನಂತರವೂ ನಮ್ಮೊಂದಿಗೆ ಇರಲು, ಬದುಕಲು ಬಂiÀÄಸಿದರೆ, ಬರಲಿ, ಇರಲಿ. ನಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿ, ನಿರೀಕ್ಷೆ, ಮನಸ್ತಾಪ, ಬೇಸರಗಳನ್ನು ಬದಿಗಿಟ್ಟು ಅವರೊಂದಿಗೆ ಬದುಕೋಣ, ಜೀವನವನ್ನು ಸುಂದರಗೊಳಿಸೋಣ. ಎಲ್ಲದಕ್ಕಿಂತ ಹೆಚ್ಚಾಗಿ, ಅತ್ಯಂತ ವೇಗವಾಗಿ ಬದಲಾಗುತ್ತಿರುವ ಈ ಇಂಟರ್ನೆಟ್ ಯುಗದಲ್ಲಿ, ತಂದೆ-ತಾಯಿ ಹಾಗೂ ಮಕ್ಕಳ ಸಂಘರ್ಷ ಕ್ಷೇತ್ರದಲ್ಲಿ, ನಾವೂ ಕೂಡಾ ವಿದ್ಯಾರ್ಥಿಗಳಾಗಿ ಬದಲಾವಣೆಗಳನ್ನು ಒಪ್ಪಿಕೊಳ್ಳೋಣ, ಒಪ್ಪಿ ಅಪ್ಪಿಕೊಳ್ಳೋಣ. 

Rate your review

About the Author

image description

I am an Engineering graduate with the experience in IT field and Marketing field but my passion for writing outstripped everything. And now, here I am as a full-time passionate writer. I was introduced to the fantastic world of books at the very young age. Being a keen observer of the life and its idiosyncrasies, each day offers me new thoughts and ideas. I delight in encapsulating those thoughts and ideas in words. My other interests are Face Reading and Graphology. And what more? I admire the beauty of nature and love being connected with it. To know further about me and my thought pattern, you can follow me at sushmalokapur.blogspot.in

comments

leave a comment